ನಗ್ನ ಪಂಥ -
ಬಟ್ಟೆ ತೊಡುವುದು ಅನೈಸರ್ಗಿಕವಾದ್ದರಿಂದ ಇತರ ಎಲ್ಲ ಪ್ರಾಣಿಗಳಂತೆ ಬೆತ್ತಲೆ ಇರುವುದು ಹೆಚ್ಚು ಆರೋಗ್ಯಕರ ಹಾಗೂ ಹೆಚ್ಚು ಸಹಜ ಎಂಬ ತತ್ತ್ವದ ಆಧಾರದ ಮೇಲೆ ಹುಟ್ಟಿದ ಒಂದು ಪಂಥ. ಒಂದನೆಯ ಮಹಾ ಯುದ್ಧವಾದ ಮೇಲೆ ನಾಗರಿಕತೆಯ ದುಷ್ಪರಿಣಾಮಗಳಿಂದ ಬೇಸತ್ತ ಕೆಲವರು ಜರ್ಮನಿಯಲ್ಲಿ ಈ ಪಂಥವನ್ನು ಪ್ರಾರಂಭಿಸಿದರು.

ವಿಚಾರ ಮಾಡಿದರೆ ನಿಸರ್ಗಮಾನವ ಶತಶತಮಾನಗಳವರೆಗೆ ಬೆತ್ತಲೆಯಾಗಿಯೆ ಇದ್ದ. ಅಂದಿಗೆ ಅವನು ಇತರ ಪ್ರಾಣಿಗಳಂತೆ ಒಂದು ಪ್ರಾಣಿ ಮಾತ್ರದವನು, ಅಷ್ಟೆ. ಅಂದು ಅವನಿಗೆ ಅತ್ಯಗತ್ಯ ಎನಿಸಿದ್ದು ಆಹಾರ. ಅದಕ್ಕಾಗಿ ಅವನು ಇತರ ಪ್ರಾಣಿಗಳಂತೆ ಹಗಲು ರಾತ್ರಿ ಬೇಟೆಯಾಡುತ್ತಿದ್ದ. ಕಾಡಿನಲ್ಲಿ ತಾನಾಗಿಯೆ ಸಿಗುತ್ತಿದ್ದ ಸೊಪ್ಪುಸದೆ, ನಾರುಬೇರು, ಗೆಡ್ಡೆಗೆಣಸು, ಹಣ್ಣುಕಾಯಿ, ತೊಗಟೆತಿರುಳು-ಇವನ್ನು ತಿನ್ನುತ್ತಿದ್ದ. ಚಳಿಯಿಂದ, ಇತರ ಕ್ರೂರಮೃಗಗಳಿಂದ ರಕ್ಷಣೆ ಪಡೆಯಲು ಗುಹೆಗಳಲ್ಲೊ ಮರದ ಮೇಲೋ ವಾಸಿಸುತ್ತಿದ್ದ. ಕೊಂದ ಪ್ರಾಣಿಯ ಚರ್ಮವನ್ನು ಒಣಗಿಸಿ ಹದ ಮಾಡಿ ಅದನ್ನು ಉಡುಗೆಯಾಗಿ ಆತ ಬಳಸಿದ್ದು ಸಾವಿರ ಸಾವಿರ ವರ್ಷಗಳ ಅನಂತರ. ಅವನಿಗೆ ನಾಚಿಕೆ ಹೇಸಿಕೆ ಎಂಬ ಸಂಕೋಚಗಳಿರಲಿಲ್ಲ. ಇನ್ನೊಬ್ಬರು ತನ್ನ ಅಂಗಾಂಗಗಳನ್ನು ನೋಡುತ್ತಾರೆಂಬ ಮುಜುಗರದಿಂದ ಅವನು ಉಡಲಿಲ್ಲ. ಚಳಿಯಿಂದ ಮಳೆಯಿಂದ ಪಾರಾಗಲು ಮಾತ್ರ ಅವನು ಉಟ್ಟ. ಇಂದಿಗೂ ಅರಣ್ಯವಾಸಿಗಳಾದ ನಿಸರ್ಗ ಮಾನವರ ಅನೇಕ ಬುಡಕಟ್ಟುಗಳು ಬೆತ್ತಲೆ ಇರುವುದನ್ನು ನಾಗರಿಕ ಪ್ರವಾಸಿಗಳು ಕಂಡಿದ್ದಾರೆ. ಒಮ್ಮೆ ಒಬ್ಬ ಬೆತ್ತಲೆ ಹೆಂಗಸಿಗೆ ದೊಡ್ಡದೊಂದು ಕೆಂಪುವಸ್ತ್ರವನ್ನು ಕೊಟ್ಟಾಗ ಆಕೆ ಅದನ್ನು ಉಡುವುದಕ್ಕೆ ಬದಲು ಉದ್ದ ಉದ್ದವಾದ ರಿಬ್ಬನ್ನುಗಳಂತೆ ಹರಿದು ಅದರ ಗೊಂಚಲನ್ನು ಕೊರಳಿಗೆ ಶೃಂಗಾರವಾಗಿ ಕಟ್ಟಿಕೊಂಡಿದ್ದನ್ನು ವಿಲ್ ಡುರಾಂಟ್ ಉಲ್ಲೇಖಿಸಿದ್ದಾನೆ. ನಾಚಿಕೆಗಾಗಿ ಬಟ್ಟೆ ಉಡುವುದು ನಾಗರಿಕತೆಯ ಲಕ್ಷಣ.

  ನಾಗರಿಕ ಜನಾಂಗಗಳ ಉಡುಗೆಯ ಚರಿತ್ರೆ ಕೂಡ ಸ್ವಾರಸ್ಯವಾಗಿದೆ. ವಿಕ್ಟೋರಿಯ ರಾಣಿಯ ಕಾಲದಲ್ಲಿ ಗಂಡಸರು ಹೆಂಗಸರು ಮೈತುಂಬ ಬಟ್ಟೆ ಹಾಕಿಕೊಳ್ಳುತ್ತಿದ್ದರು. ಒಂದು ಕಾಲದಲ್ಲಿ ತ್ರೀ ಪೀಸ್ ಸೂಟ್ ಫ್ಯಾಷನ್ ಆಗಿತ್ತು. ಇವತ್ತಿಗೂ ಅರಬರು ದೊಗಲೆ ಪಾಯಿಜಾಮ, ನಿಲವಂಗಿ, ನೂರು ಮೊಳದ ಪೇಟ ಕಟ್ಟುತ್ತಾರೆ. ಹೆಂಗಸರು ಮೈಮುಚ್ಚುವ ಲಂಗ, ಮುಖಕ್ಕೆ ಬುರುಕಿ ಹಾಕುತ್ತಾರೆ.

  ಈಗ ಉಡುಗೆಯ ಫ್ಯಾಷನ್ ವ್ಯತ್ಯಾಸವಾಗಿದೆಯಾಗಿ ಹೆಂಗಸರು ಗಂಡಸರು ತುಂಬ ಕಡಿಮೆ ಬಟ್ಟೆ ಧರಿಸುತ್ತಾರೆ. ತಮ್ಮ ಸೌಂದರ್ಯವನ್ನು ಹೆಚ್ಚು ಪ್ರದರ್ಶಿಸಬೇಕೆಂಬುದೇ ಅವರ ಆಶಯ.

  ಧಾರ್ಮಿಕವಾಗಿ ನೋಡಿದರೆ ಜೈನರಲ್ಲಿ ಒಂದು ಮುಖ್ಯ ಪಂಗಡದವರಾದ ದಿಗಂಬರ ಸನ್ಯಾಸಿಗಳು ನಗ್ನರಾಗಿಯೇ ಇರುತ್ತಾರೆ. ಗಂಡು ಹೆಣ್ಣು ನಗ್ನರಾಗಿ ಒಬ್ಬರನ್ನೊಬ್ಬರು ನೋಡಿದಾಗಲೂ ಯಾರ ಮನಸ್ಸೂ ಕಾಮವಿಕಾರಕ್ಕೆ ಒಳಗಾಗಬಾರದು; ಅಂಥ ಇಂದ್ರಿಯನಿಗ್ರಹವನ್ನು ಮನುಷ್ಯ ಗಳಿಸಿಕೊಳ್ಳಬೇಕು ಎಂಬುದು ದಿಗಂಬರರ ಧ್ಯೇಯ.

  ಇನ್ನು ಭಾರತದಲ್ಲಿ ಸ್ತ್ರೀಪೂಜಾ ಪದ್ಧತಿ ಆಚರಣೆಯಲ್ಲಿದ್ದಾಗ ನಗ್ನಸ್ತ್ರೀಯೊಬ್ಬಳನ್ನು ದೇವರ ಸ್ಥಾನದಲ್ಲಿ ಕೂಡಿಸಿ ನಗ್ನರಾದ ಭಕ್ತಾದಿಗಳು ಪೂಜೆ ಮಾಡುತ್ತಿದ್ದರೆಂದು ಬೆಂಜಮಿನ್ ವಾಕರ್ ಹೇಳುತ್ತಾನೆ.

  ಈಗಿನ ನಗ್ನಪಂಥ ಧಾರ್ಮಿಕ ಮೂಲದಿಂದ ಬಂದದ್ದಲ್ಲ. ಅಸಹಜವಾದ ನಾಗರಿಕ ಜೀವನದಿಂದ ನೈಸರ್ಗಿಕ ಜೀವನದೆಡೆಗೆ ಹೋಗಲು ನಗ್ನತೆ ಅಗತ್ಯವೆಂದು ಈ ಪಂಥದವರ ವಾದ.

  ಒಂದನೆಯ ಮಹಾಯುದ್ಧ ಮುಕ್ತಾಯವಾದ ಮೇಲೆ ನಗ್ನಪಂಥ ಶೀಘ್ರವಾಗಿ ಜರ್ಮನಿಯಲ್ಲಿ ಎಲ್ಲ ಕಡೆಗಳಲ್ಲೂ ಚೆಕೊಸ್ಲೊವಾಕಿಯ, ನೆದರ್‍ಲ್ಯಾಂಡ್, ಸ್ವಿಟ್ಸರ್ಲೆಂಡ್, ಸ್ಕ್ಯಾಂಡಿನೇವಿಯ, ಆಸ್ಟ್ರಿಯ, ಫ್ರಾನ್ಸ್ ಹಾಗೂ ಯೂರೋಪು ಖಂಡದ ಇತರ ದೇಶಗಳಲ್ಲೂ ಹರಡಿತು. ಕೊನೆಗೆ 1930 ಹಾಗೂ ಅನಂತರದ ವರ್ಷಗಳಲ್ಲಿ ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಈ ಪಂಥ ಹರಡಿ ಅನೇಕ ನಗ್ನಪಂಥವಾದಿಗಳ ಕಾಲೋನಿಗಳು ಸ್ಥಾಪಿತವಾದವು. ಒಂದು ಮಾತಂತೂ ಸತ್ಯ. ನಗ್ನಪಂಥಿಗಳು ಎಲ್ಲೂ ಅಲ್ಪಸಂಖ್ಯಾತರೆ. ಆದ್ದರಿಂದ ಉಳಿದವರೆಲ್ಲ ಇವರ ಪಂಥವನ್ನು ಖಂಡಿಸುತ್ತಲೇ ಬಂದಿದ್ದಾರೆ. ಪೋಪ್‍ಗುರು ಈ ಆಚರಣೆ ನೀತಿವಿರುದ್ಧವಾದದ್ದೆಂಬುದಾಗಿ ದೂಷಿಸಿದರು. ಪ್ರಷ್ಯದಲ್ಲಿ ನಾಟ್ಸಿ ಆಳ್ವಿಕೆಗೆ ಮೊದಲು ಹಾಗೂ ಅನಂತರ ಪೋಲೀಸರು ಈ ಕಾಲೋನಿಗಳ ಮೇಲೆ ದಾಳಿ ಮಾಡಿದರು. ಎಲ್ಲ ರಾಜ್ಯಗಳಲ್ಲಿ ಇದರ ವಿರುದ್ಧವಾಗಿ ಬಲವಾದ ಶಾಸನಗಳನ್ನು ರಚಿಸಲಾಯಿತು. ಆದರೂ ಈ ಪಂಥ ಅಳಿಯದೆ ಮುಂದುವರಿಯಿತು. 1970ರ ವೇಳೆಗೆ ಸಾವಿರಾರು ಜನ ನಗ್ನಪಂಥದ ಸದಸ್ಯರಿದ್ದರೆಂದು ಅಂಕಿಅಂಶಗಳು ಹೇಳುತ್ತವೆ.

  ಜರ್ಮನಿಯಲ್ಲಿನ ನಗ್ನಪಂಥ ಸಾಂಪ್ರದಾಯಿಕವಾಗಿದ್ದ ಶರೀರ ವ್ಯಾಯಾಮ ಸಾಧನೆಗಳಿಗೆ ಸಂಬಂಧಪಟ್ಟಿದೆ. ಉತ್ತರ ಅಮೆರಿಕದಲ್ಲಿ ಇಂಥ ಶಿಬಿರಗಳಲ್ಲಿ ಸಮರ್ಪಕವಾದ ಹಾಗೂ ಸಭ್ಯವಾದ ಸಾಮಾಜಿಕ ವರ್ತನೆಯನ್ನು ಕಾಣಬಹುದು. ಅಲ್ಲೆಲ್ಲ ಮದ್ಯಪಾನ ನಿಷಿದ್ಧ.

  ನಗ್ನಪಂಥದ ಚಳವಳಿ ಭಾಗಶಃ ಉಡುಪಿಗೆ ಸಂಬಂಧಿಸಿರುವ ಸಂಪ್ರದಾಯಗಳಿಗೆ ವಿರುದ್ಧವಾಗಿರುವ ಪ್ರತಿಕ್ರಿಯೆ. ಗಾಳಿ ಹಾಗೂ ಸೂರ್ಯನ ಬೆಳಕಿನಿಂದ ಮಾನವ ಶರೀರವನ್ನು ಉಡುಪು ಪ್ರತ್ಯೇಕಿಸುತ್ತದೆ ಎಂಬ ವಾದದ ಮೇಲೆ ಉಡುಪನ್ನು ಧರಿಸುವುದನ್ನು ವಿರೋಧಿಸಲಾಗಿದೆ. ನಗ್ನಪಂಥಾಚಾರಿಣಿಯು ವ್ಯಕ್ತಿಗಳಿಗೆ ತಮ್ಮ ತಮ್ಮ ಶರೀರಗಳ ಸ್ಥಿತಿಗಳನ್ನು ಉತ್ತಮಪಡಿಸಿಕೊಳ್ಳುವಂತೆ ಪ್ರೇರೇಪಿಸುವುದರಿಂದ, ಅದು ಅವರ ಆರೋಗ್ಯದ ಸುಧಾರಣೆಗೆ ಹೆಚ್ಚು ಸಹಾಯವನ್ನು ಮಾಡುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಈ ಆಚರಣೆಯಲ್ಲಿ ತೊಡಗಿರುವವರು ಸಾಮಾನ್ಯ ಜನರಲ್ಲಿ ಇದರಿಂದ ನಾಚಿಕೆ ಅಥವಾ ತಪ್ಪು ಮಾಡಿದೆವೆಂಬ ಭಾವನೆ ಉಂಟಾಗುತ್ತದೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ಪ್ರತಿಯಾಗಿ ಅವರು ಆ ತರಹದ ಭಾವನೆಗಳೇನಾದರೂ ಬಂದರೆ ಅವು ಬೇಗನೆ ಮಾಯವಾಗುತ್ತವೆ ಎಂಬುದಾಗಿ ವಾದಿಸುತ್ತಾರೆ. ನಗ್ನಪಂಥಾಚರಣೆಯ ಶರೀರದ ವಿಚಾರದಲ್ಲಿ ಒಂದು ಸಮರ್ಪಕವಾದ ಮನೋಭಾವ ಉಂಟಾಗುವಂತೆ ಮಾಡುತ್ತದೆ. ಕೃತಕವಾಗಿರುವ ಅಡಚಣೆಯನ್ನು ತೆಗೆದು ಹಾಕಿ ಸ್ತ್ರೀ-ಪುರುಷರ ನಡುವೆ ಉತ್ತಮ ಮಟ್ಟದ ಪ್ರಾಮಾಣಿಕತೆ ಹಾಗೂ ಮುಚ್ಚುಮರೆಯಿಲ್ಲದ ಸರಳ ಸ್ವಾಭಾವಿಕ ಸಂಬಂಧ ಉಂಟಾಗುವಂತೆ ಮಾಡುತ್ತದೆ. ಲೈಂಗಿಕ ಪ್ರತ್ಯೇಕತೆಯನ್ನು ತೊಡೆದು ಹಾಕುತ್ತದೆ ಮತ್ತು ಮಾನವಶರೀರದ ಮುಖ್ಯವಾಗಿ ಸ್ತ್ರೀದೇಹದ ಬಗ್ಗೆ ಇರುವ ತಪ್ಪಾದ ಅಭಿಪ್ರಾಯಗಳನ್ನು ಸರಿಪಡಿಸಿ ಮಾನವ ಸಂಘಟನೆ ಹೆಚ್ಚುವಂತೆ ಮಾಡುತ್ತದೆ ಎಂಬುದಾಗಿಯೂ ಸಹ ಅವರು ವಾದಿಸುತ್ತಾರೆ.
(ಎಂ.ಬಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ